ಶುಕ್ರವಾರ, ಜುಲೈ 21, 2017

ಪ್ರಜಾ ಪ್ರಭತ್ವವೆಂಬ ಲೊಳಲೊಟ್ಟೆ



ಜಗತ್ತಿನ ಅತಿ ದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆಇರುವ ರಾಷ್ಟ್ರ ಎಂದು ಗುರುತಿಸಿಕೊಂಡಿರುವ  ಭಾರತದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿವೆ. ನಿಜಕ್ಕೂ ಈ ದೇಶ ಪ್ರಜಾಪ್ರಭುತ್ವ ರಾಷ್ಟ್ರವೆ? ಅಥವಾ ಆ ರೀತಿಯಲ್ಲಿ ಆರೋಪ ಹೊತ್ತಿಕೊಂಡಿದೆಯಾ? ಎಂಬ ಅನುಮಾನ  ದಟ್ಟವಾಗುತ್ತಿದೆ. ಏಕೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಈ ಮೂರು ಅಂಗಗಳು ಪ್ರಶ್ನಾರ್ಹವಾಗಿದ್ದರೆ, ನಾಲ್ಕನೆಯ ಪ್ರಮುಖ ಅಂಗವಾಗಿದ್ದ ಪತ್ರಿಕಾ ರಂಗವು ಈಗ ಪತ್ರಿಕೋದ್ಯಮವಾಗಿದ್ದು, ಉಳ್ಳವರ ಕಾಲಕೆಳಗಿನ ಚಪ್ಪಲಿಗಳಂತೆ ಸವೆಯುತ್ತಿದೆ. ಒಂದೆಡೆ, ನಿರ್ಧಾಕ್ಷಿಣ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದರೆ, ಮತ್ತೊಂದೆಡೆ, ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಬಂಡವಾಳಶಾಹಿ ಜಗತ್ತಿನ ಮತ್ತು ಅಧಿಕಾರವೆಂಬ ಅರಮನೆಯ ತುತ್ತೂರಿ ಮತ್ತು ಕಹಳೆಗಳಂತೆ ಮೊಳಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಇತ್ತೀಚೆಗೆ ನಡೆದ ಎರಡು ಬೆಳವಣಿಗೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸುವಂತಿವೆ.
 ಗುಜರಾಜತ್ ಮೂಲದ ಹಾಗೂ ಕಳೆದ ಐದಾರು ವರ್ಷಗಳಿಂದ ವಿಶೇಷವಾಗಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಭಾರತದ ಕಾರ್ಪೊರೇಟ್ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದು, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ, ಬಂದರುಗಳ ನಿರ್ಮಾಣ ಮತ್ತು ಅಭಿವೃದ್ಧಿ ಹಾಗೂ ಗಣಿಕಾರಿಕೆ ಈ ವಲಯದಲ್ಲಿ ಸಾಮ್ರಾಟ ಎನಿಸಿಕೊಂಡಿರುವ ಗೌತಮ್ ಅದಾನಿ ಮಾಲೀಕತ್ವದ ಅದಾನಿಗ್ರೂಪ್ ಸಂಸ್ಥೆಯು ಮುಂಬೈ ಮೂಲದ “ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಎಂಬ ಇಂಗ್ಲೀಷ್ ವಾರಪತ್ರಿಕೆಯ ಮೇಲೆ 500 ಕೋಟಿ ರೂಪಾಯಿಗಳ ಮಾನನಷ್ಟು ಮೊಕೊದ್ದಮೆ ಹೂಡಿದೆ. ಅದಾನಿ ಕಂಪನಿಯು ಕೇಂದ್ರ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂಪಾಯಿ ನಷ್ಟು ತೆರಿಗೆ ವಂಚಿಸಿದೆ ಎಂಬ ಒಂದು ಲೇಖನ ಮತ್ತು ವಿಶೇಷ ಆರ್ಥಿಕ ವಲಯದಲ್ಲಿ ( ಸ್ಪೆಷಲ್ ಎಕನಾಮಿಕ್ ಜೂನ್) ಕೈಗಾರಿಕೆ ಸ್ಥಾಪನೆಯಾಗಿದೆ ಎಂದು ಹೇಳುವುದರ ಮೂಲಕ  500 ಕೋಟಿ ರೂಪಾಯಿ ನಷ್ಟು ತೆರಿಗೆ ವಿನಾಯತಿ ಪಡೆದಿದೆ ಎಂಬ ಲೇಖನಗಳು ಪ್ರಕಟವಾಗಿ ರಾಜಕೀಯ ವಲಯದಲ್ಲಿ ಸಣ್ಣ ಕಂಪನವನ್ನು ಮೂಡಿಸಿದ್ದವು.
ಕಳೆದ ವರ್ಷ ತಾನೆ ಐವತ್ತನೆಯ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ  ಎಕನಾಮಿಕ್ ಅಂಡ್ ಪೊಲಟಿಕಲ್ ಪತ್ರಿಕೆಯು ಸ್ವಾತಂತ್ರ್ಯಾನಂತರದ ಭಾರತದಲ್ಲಿ ದೇಶದ ರಾಜಕೀಯ, ಆರ್ಥಿಕ, ವಿದ್ಯಾಮಾನಗಳನ್ನು ಆಳವಾದ ಅಧ್ಯಯನ ಮತ್ತು ವಿದ್ವತ್ ಪೂರ್ಣ ವಿಶ್ಲೇಷಣೆಯ ಮೂಲಕ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದು, ಭಾರತದ ಪ್ರಜ್ಞಾವಂತರ , ಲೇಖಕರು, ಚಿಂತಕರು,ಹಾಗೂ ಪತ್ರಕರ್ತರ ಬದುಕಿನ ಒಂದು ಭಾಗವಾಗಿದೆ.  ಸಮೀಕ್ಷಾ ಟ್ರಸ್ಟ್ ನ ಅಡಿಯಲ್ಲಿ ಪ್ರಕಟವಾಗುವ ಈ ಪತ್ರಿಕೆಯು ಯಾವುದೇ ಜಾಹಿರಾತನ್ನು ಸ್ವೀಕರಿಸುವುದಿಲ್ಲ. ಕೇವಲ ಓದುಗರ ವಾರ್ಷಿಕ ಚಂದಾ ಮತ್ತು ಆಯ್ಧ ಹಳೆಯ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದರಿಂದ ಬರುವ ಆದಾಯವನ್ನು ಈ ಪತ್ರಿಕೆಯು ನಂಬಿಕೊಂಡಿದೆ. ಇಲ್ಲಿನ ಸಂಪಾದಕಿಯ ಮಂಡಳಿಯ ಸದಸ್ಯರಾಗಲಿ, ಈ ಪತ್ರಿಕೆಗೆ ಬರೆಯುವ ಲೇಖಕರಾಗಲಿ ಸಂಭಾವನೆ ಪಡೆಯುವುದಿಲ್ಲ. ಒಂದು ದೇಶವನ್ನು ಹಾದಿ ತಪ್ಪದಂತೆ ಸರಿಯಾದ ಹಾದಿಯಲ್ಲಿ ಕೊಂಡೊಯ್ಯಬೇಕೆಂಬ ಬದ್ಧತೆ ಈ ಪತ್ರಿಕೆಯ ಗುರಿಯಾಗಿದೆ. ಹಾಗಾಗಿ ಈ ಪತ್ರಿಕೆಗೆ ದೇಶ, ವಿಶೇಷಗಳಿಂದ ಅಂತರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞರು, ಇತಿಹಾಸ ತಜ್ಞರು, ರಾಜಕೀಯ ತಜ್ಞರು ಲೇಖನ ಬರೆಯುತ್ತಾರೆ. ಇಂತಹ ಪತ್ರಿಕೆಯಲ್ಲಿ ಲೇಖನ ಬರೆಯುವುದು ಅಥವಾ ಪ್ರಕಟವಾಗುವುದು ಪ್ರತಿಯೊಬ್ಬರಿಗೂ ಗೌರವದ ಸಂಗತಿಯಾಗಿದೆ.
ಕಳೆದ ವರ್ಷ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡಿದ್ದ ಪರಂಜೋಯ್ ಗುಹಾ  ಅವರು 43 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಪಳಗಿದವರು. ಈ ಹಿಂದೆ ಮುಖೇಶ್ ಅಂಬಾನಿಯವರ  ಅನಿಲ ಕೊಳವೆ ಬಾವಿಗಳ ಹಗರಣ ಕುರಿತು ತನಿಖಾ ವರದಿಯನ್ನು ಪ್ರಕಟಿಸಿ ಹೆಸರು ಮಾಡಿದವರು. ಅವರ ಸಂಪಾದಕಿಯದ ನೇತೃತ್ವದಲ್ಲಿ ಪ್ರಕಟವಾದ ಅದಾನಿ ಗ್ರೂಪ್ ನ ಎರಡು ವರದಿಗಳು ಈಗ ಸಮೀಕ್ಷ ಟ್ರಸ್ಟ್ ಅನ್ನು ಸಂಕಷ್ಟಕ್ಕೆ ಗುರಿಮಾಡಿವೆ. ಹಾಗಾಗಿ ಕಳೆದವಾರ ಅವರು ತಮ್ಮ ಸಂಪಾದಕನ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇದೀಗ ಐನೂರು ಕೋಟಿ ರೂಪಾಯಿಗಳ ಮಾನನಷ್ಟ ಮೊಕೊದ್ದಮೆಯನ್ನು ಎದುರಿಸಲಾಗದ ಪತ್ರಿಕೆಯು ಆ ಎರಡು ಲೇಖನಗಳನ್ನು ವಾಪಸ್ ತೆಗೆದು ಕೊಳ್ಳಲು ಅಂದರೆ, ಪತ್ರಿಕೆಯ ಸಂಗ್ರಹದಲ್ಲಿ ಲೇಖನಗಳು ಇರದಂತೆ ನೋಡಿಕೊಳ್ಳಲು ನಿರ್ಧರಿಸಿದೆ. ( ಮುಂದಿನ ದಿನಗಳಲ್ಲಿ ಕ್ಷಮೆ ಕೇಳಿ, ವಿಷಾಧ ವ್ಯಕ್ತ ಪಡಿಸಿದರೂ ಆಶ್ಚರ್ಯವಿಲ್ಲ)
ಐವತ್ತು ವರ್ಷಗಳ ಕಾಲ ಯಾವ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೆ, ಧೈರ್ಯ ಮತ್ತು ಬದ್ಧತೆಯಿಂದ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದ ಪತ್ರಿಕೆಯೊಂದು ಇಂದು ಕಾರ್ಪೊರೇಟ್ ವಲಯದ ಬೃಹತ್ ಉದ್ಯಮದ ಒಡೆಯನ  ಮುಂದೆ ಮಂಡಿಯೂರಿ ಕೂರುವ ಸ್ಥಿತಿ ತಲುಪಿದೆ.  ಈ ದೇಶದಲ್ಲಿ ಅಧಿಕಾರ ಮತ್ತು ಹಣ ಈ ಎರಡು ಸಂಗತಿಗಳು ಸತ್ಯ ಮತ್ತು ನ್ಯಾಯವನ್ನು ಮಣಿಸುವ ಹಂತಕ್ಕೆ ಬೆಳೆದು ನಿಂತಿವೆ. ಮುಂಬೈ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನದಿಂದ ಅಲ್ಲಿನ ರಸ್ತೆಗಳಲ್ಲಿ ಗುಂಡಿ ಬಿದ್ದರುವುದನ್ನು ಖಂಡಿಸಿ, ಅಲ್ಲಿನ  ರೆಡ್ ಎಫ್ ಎಂ. ರೇಡಿಯೋ ಒಂದರ ಜಾಕಿ ಮಾಲ್ಸಿಕ ಮೆಂಡೊನ್ಸ ಎಂಬ ಯುವತಿ ಬರೆದು ಹಾಡಿದ ಹಾಡೊಂದು ಮುಂಬೈ ನಗರ ಪಾಲಿಕೆಯ ಆಡಳಿತವನ್ನು ಹಿಡಿದಿರುವ ಶಿವಸೇನೆಯನ್ನು ಕೆರಳಿಸಿದೆ. ರೇಡಿಯೋ ಛಾನಲ್ ಮೇಲೆ 500 ಕೋಟಿ ರೂಪಾಯಿ ಮಾನನಷ್ಟ ಮೊಕೊದ್ದಮೆ ಹೂಡಲು ನಿರ್ಧರಿಸಿದೆ. ಇದರಿಂದಾಗಿ ಆ ಯುವತಿ ಉದ್ಯೋಗ ಕಳೆದುಕೊಂಡರೆ, ಆಶ್ಚರ್ಯವೇನಿಲ್ಲ. ಇದರ  ಜೊತೆಗೆ ಮರಾಠಿ ಭಾಷೆಯ ಟಿ.ವಿ. 9- ಛಾನಲ್ ನಲ್ಲಿ ಪ್ರತಿದಿನ ರಾತ್ರಿ 9ರಿಂದ 10 ಗಂಟೆಯವರೆಗೆ ಚರ್ಚೆ ನಡೆಸಿಕೊಡುತ್ತಿದ್ದ ನಿಖಿಲ್ ವಾಗ್ಲೆ ಎಂಬುವವರ ಕಾರ್ಯಕ್ರಮಕ್ಕೆ ಇದೇ ಜುಲೈ20 ರಿಂದ ಕೊಕ್ ನೀಡಲಾಗಿದೆ. ಮಹಾರಾಷ್ಟ್ರದ ರೈತರ ಆತ್ಮಹತ್ಯೆ, ಅಲ್ಲಿನ ಬಿ.ಜೆ.ಪಿ. ಸರ್ಕಾರದ ವೈಫಲ್ಯ, ಪ್ರಧಾನಿ ನರೇಂದ್ರ ಮೋದಿಯವರ  ಆಡಳಿತ ವೈಖರಿಯನ್ನು ನಿರಂತರವಾಗಿ ಚರ್ಚೆಗೆ ಒಳಪಡಿಸಿದ್ದು ವಾಗ್ಲೆಯವರ ಕಾರ್ಯಕ್ರಮ ರದ್ದಾಗಲು ಕಾರಣವಾಯಿತು. ಛಾನಲ್ ಆಡಳಿತ ಮಂಡಳಿಯ ಮೇಲೆ ಯಾರು ಪ್ರಭಾವ ಬೀರಿದವರು? ಅದು ಪ್ರಭಾವವೆ? ಅಥವಾ ಬೆದರಿಕೆಯೆ? ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಹಣವಿರುವವರು ಮತ್ತು ಅಧಿಕಾರದ ತೋಳ್ಬಲ ಇರುವವರು ಅಧಿಕ ಮೊತ್ತದ ಮಾನನಷ್ಟ ಮೊಕೊದ್ದಮೆ ಹೂಡುವುದರ ಮುಖಾಂತರ  ಸತ್ಯ, ನ್ಯಾಯದ ಬಾಯಿ ಮುಚ್ಚಿಸುತ್ತಿರುವ ಪರಿ ಇದು.
ವಾಸ್ತವವಾಗಿ ಈ ದೇಶದಲ್ಲಿ ಪತ್ರಿಕಾ ಸ್ವಾತಂತ್ಯವು ತನ್ನ ಅರ್ಥವನ್ನು ಕಳೆದುಕೊಂಡು ಎಷ್ಟೋ ವರ್ಷಗಳಾದವು. ಬೆರಳೆಣೆಕೆಯಷ್ಟು ಪತ್ರಿಕೆಗಳನ್ನು ಹೊರತು ಪಡಿಸಿದರೆ, ಈ ದೇಶದ ಬಹುತೇಕ ಪತ್ರಿಕೆಗಳು ಮತ್ತು ಮನರಂಜನಾ ಛಾನಲ್ ಗಳು ಹಾಗೂ ಸುದ್ಧಿ ಛಾನಲ್ ಗಳು ಕಾರ್ಪೊರೇಟ್ ಸಂಸ್ಥೆಗಳ  ಅಥವಾ ರಾಜಕಾರಣಿಗಳ ಹಿಡಿತದಲ್ಲಿವೆ. ಇವುಗಳಲ್ಲಿ ಪ್ರಕಟವಾಗುವ, ಪ್ರಸಾರವಾಗುವ ಸುದ್ದಿಗಳು ಮಾಲೀಕರ ಮೂಗಿನ ನೇರಕ್ಕೆ ತಕ್ಕುದಾಗಿ ಇರುತ್ತವೆ. ಛಾನಲ್ ಗಳಲ್ಲಿ ಬಡಬಡಿಸುವ ಪತ್ರಕರ್ತರು, ಮತ್ತು ಪತ್ರಿಕೆಯಲ್ಲಿ ವರದಿ ಬರೆಯುವವರು  ಕೇವಲ ಪಂಜರದ ಗಿಣಿಗಳು ಮಾತ್ರ. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಎದೆಯಾಳದ ಮಾತುಗಳಾಗದೆ, ಕೇವಲ ತುಟಿಯಂಚಿನ ಮಾತುಗಳಂತೆ ಕೇಳಿಸುತ್ತದೆ.
ಈ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರ ನಿರ್ಬಂಧಿಸಲಾಗುತ್ತಲ್ಲ, ಪ್ರಸಾರ ಮಾಧ್ಯಮದ ಎಲ್ಲಾ ಕ್ಷೇತ್ರಗಳಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತರಲಾಗಿದೆ. ನೊಬಲ್ ಪ್ರಶಸ್ತಿ ವಿಜೇತ ಹಾಗೂ ಜಾಗತಿಕ ಮಟ್ಟದಲ್ಲಿ ತನ್ನ ಅಭಿವೃದ್ಧಿ ಅರ್ಥಶಾಸ್ತ್ರದ ಚಿಂತನೆಗಳ ಮೂಲಕ ಹೆಸರಾಗಿರುವ ಅಮಾರ್ತ್ಯ ಸೇನ್ ಅವರ ಕುರಿತಾದ “ ದ ಆರ್ಗ್ಯುಮೆಂಟೀಟಿವ್ ಇಂಡಿಯನ್” ಎಂಬ ಸಾಕ್ಷ್ಯ ಚಿತ್ರದಲ್ಲಿ ಅವರು ನೀಡಿರುವ ಸಂದರ್ಶನದಲ್ಲಿ  ಗೋವು, ಗುಜರಾತ್, ಹಿಂದೂ, ಇತ್ಯಾದಿ  ಶಬ್ದಗಳಿಗೆ ಕತ್ತರಿ ಪ್ರಯೋಗ ಇಲ್ಲವೆ , ಮಾತುಗಳ ಶಬ್ದವನ್ನು ಅಡಗಿಸಬೇಕೆಂದು ಭಾರತ ಸೆನ್ಸಾರ್ ಮಂಡಳಿಯು ನಿರ್ದೇಶಕ ಸುಮನ್ ಘೋಷ್ ರವರಿಗೆ ತಿಳಿಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅವರ ಆಡಳಿತದ ವೈಖರಿಯನ್ನು ನೇರವಾಗಿ ಖಂಡಿಸುತ್ತಾ ಬಂದಿದ್ದ ಅಮಾರ್ತ್ಯ ಸೇನರಿಗೆ ಇದೇ ಮೋದಿಯ ನೇತೃತ್ವದ ಸರ್ಕಾರ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿ, ಅವರು ನಳಂದ ಅಂತರಾಷ್ಟ್ರೀಯ ವಿ.ವಿ.ಯ ಸಂದರ್ಶಕ ಪ್ರಾದ್ಯಾಪಕ ಹುದ್ದೆಯನ್ನು ತೊರೆಯುವಂತೆ ಮಾಡಿತು. ಇತ್ತೀಚೆಗಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬಹುತೇಕ ಸಂಸ್ಥೆಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ನೃತ್ಯ ಮತ್ತು ಸಂಗೀತ ಅಕಾಡೆಮಿ,  ರಾಷ್ಟ್ರೀಯ ನಾಟಕ ಅಕಾಡೆಮಿ, ಪುಣೆ ಫಿಲಂ ಇನ್ಸ್ ಟ್ಯೂಟ್  ಹೀಗೆ ಹಲವು ಸಂಸ್ಥೆಗಳಲ್ಲಿ ಮೋದಿ ಭಜನಾ ಮಂಡಲಿಯ ಸದಸ್ಯರನ್ನು ತುಂಬುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.
ಉತ್ತರ ಪ್ರದೇಶದಲ್ಲಿ ಕಳೆದ ಎರಡು ಮೂರು ತಿಂಗಳ ಅವಧಿಯಲ್ಲಿ ಎಂಟನೂರಕ್ಕೂ ಹೆಚ್ಚು ಹತ್ಯೆಗಳಾಗಿವೆ. ಈ ಕುರಿತು ಮಾತನಾಡಲು ರಾಜ್ಯ ಸಭೆಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಗೆ ಅವಕಾಶವಿಲ್ಲ. ಆದರೆ, ಮಂಗಳೂರಿನ ಕೋಮು ಗಲಭೆ ಕುರಿತು ಹಿಂದು ಸಂಘಟನೆಯ ಯುವಕರು ಕೊಲೆಯಾಗುತ್ತಿದ್ದಾರೆ ಎಂಬ ತಪ್ಪು ಅಂಕಿ ಅಂಶಗಳನ್ನು ಇಟ್ಟುಕೊಂಡು ಕೂಗಾಡುವ ಕೂಗುಮಾರಿ ಸಂಸ್ಕೃತಿಯ  ಅವಿವೇಕಿಗಳಿಗೆ ಸಂಸತ್ತಿನ ಕೆಳಮನೆಯಲ್ಲಿ (ಪಾರ್ಲಿ ಮೆಂಟ್) ಅವಕಾಶ ಕಲ್ಪಿಸಲಾಗುತ್ತದೆ.  ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಂತ್ರಕ್ಕಿಂತ ಉಗುಳು ಜಾಸ್ತಿ ಎನ್ನುವ ಹಾಗೆ ನರೇಂದ್ರ ಮೋದಿಯವರು ಅಧಿಕಾರದಲ್ಲಿ ಮಾಡಿಕೊಂಡ ಎಡವಟ್ಟುಗಳಿಗೆ ಲೆಕ್ಕವಿಲ್ಲ. ಜನಾಧನ್ ಎಂಬ ಬ್ಯಾಂಕ್ ಗಳಲ್ಲಿ ಖಾತೆ ಆರಂಭಿಸಲು ಬಡವರಿಗೆ ನೀಡದ ಕರೆ, ಮಕಾಡೆ ಮಲಗಿದ ಸ್ವಚ್ಛ ಭಾರತ್, ನಮಾಮಿ ಗಂಗಾ ಯೋಜನೆ,  ಬಡಮಧ್ಯಮ ವರ್ಗವನ್ನು ಸಂಕಷ್ಟಕ್ಕೆ ಸಿಲುಕಿಸಿದ ನೊಟು ನಿಷೇಧ ಪ್ರಕರಣ, ಗೋಹತ್ಯೆ ನಿಷೇಧ ಪ್ರಕರಣ  ಒಂದೇ? ಎರಡೇ? ಸಾಲು ಸಾಲು ಬರೆಯ ಬಹುದು. ಇಂತಹ ಕಣ್ಣೆದುರುಗಿನ ಸುಡುವ ಕೆಂಡದಂತಹ ಸತ್ಯಗಳನ್ನು ಹೇಳುವುದು ಕೂಡ ಈಗ ಅಪರಾಧವಾಗಿದೆ. 
1975 ರ ಜುಲೈ ತಿಂಗಳಿನಲ್ಲಿ ಅಂದಿನ ಪ್ರಧಾನ ಪ್ರಧಾನಿ ಇಂದಿರಾ ಗಾಂಧಿಯವರು ಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದರು. ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ.  ಇನ್ನುಮುಂದೆ ಯಾವುದೇ ಪತ್ರಿಕೆ ಅಥವಾ ಪತ್ರಕರ್ತ ರಾಜಕಾರಣಿಯನ್ನು ಮತ್ತು ಉದ್ಯಮಿಗಳನ್ನು ಎದುರು ಹಾಕಿಕೊಳ್ಳುವಂತಿಲ್ಲ. ಅವರು ಹಾಕುವ ಕೋಟಿಗಟ್ಟಲೆ ಮಾನನಷ್ಟ ಮೊಕೊದ್ದಮೆಗೆ ಹೆದರಿ ಬಾಯಿಮುಚ್ಚಿಕೊಂಡು ಕೂರಬೇಕು. ಇದು ಇಂದಿನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ದಯನೀಯ ಸ್ಥಿತಿ.

( ಕರಾವಳಿ ಮುಂಜಾವು ದಿನಪತ್ರಿಕೆಯ “ಜಗದಗಲ” ಅಂಕಣ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ