ಗುರುವಾರ, ಮಾರ್ಚ್ 16, 2017

ಮಾನವ ನಿರ್ಮಿತ ಬರದ ಬೇಗೆಯನ್ನು ಬಿಚ್ಚಿಡುವ ಮನೋಜ್ಞ ಕೃತಿ: ಕ್ಷಾಮ ಡಂಗುರ


ಕಳೆದ ಮೂರು ವರ್ಷಗಳಿಂದ ಸತತವಾಗಿ ಕರ್ನಾಟಕವನ್ನು ಆವರಿಸಿಕೊಂಡಿರುವ ಬರಗಾಲ ಎಲ್ಲಾ ಜೀವಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಾಜ್ಯದ ನೂರ ಅರವತ್ತೆರೆಡಕ್ಕೂ ಹೆಚ್ಚು ತಾಲ್ಲೂಕುಗಳು ಬರದ ಬೇಗೆಯಲ್ಲಿ ಬೇಯುತ್ತಿವೆ. ಪ್ರಕೃತಿಯ ಸೃಷ್ಟಿಯ ಒಂದು ಭಾಗವಾಗಿರುವ ಬರವು ಈ ದೇಶಕ್ಕಾಗಲಿ ಅಥವಾ ರಾಜ್ಯಕ್ಕಾಗಲಿ ಹೊಸತಲ್ಲ. 1943 ರಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ಬರಗಾಲಕ್ಕೆ ಬಿಹಾರ, ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜನತೆ ಹಸಿನಿಂದ ಕಂಗಾಲಾಗಿ ತರಗಲೆಗಳಂತೆ ಭೂಮಿಗೆ ಉದುರಿ ಹೋದ ದುರಂತದ ಇತಿಹಾಸವು ಚರಿತ್ರೆಯ ಪುಟಗಳಲ್ಲಿ ಚಿತ್ರಗಳ ಸಮೇತ ದಾಖಲಾಗಿದೆ. ಈ ಘಟನೆಯ ನಂತರ 1970 ರ ದಶಕದಲ್ಲಿ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಮತ್ತೊಮ್ಮೆ ಭೀಕರವಾದ ಕ್ಷಾಮ ಆವರಿಸಿಕೊಂಡಿತ್ತು. ನಲವತ್ತು ವರ್ಷಗಳ ಹಿಂದೆ ಬರದ ಲಕ್ಷಣಗಳಲ್ಲಿ ಪ್ರಮುಖವಾಗಿ ಆಹಾರದ ಕೊರತೆ ಎದ್ದು ಕಾಣುತ್ತಿತ್ತು. ನಂತರದ ದಿನಗಳಲ್ಲಿ  ಕುಡಿಯುವ ನೀರಿನ ಕೊರತೆಯಿಂದಾಗಿ ಜನ ಮತ್ತು ಜಾನುವಾರುಗಳಿಗೆ ತೊಂದರೆಯಾಗಿ ಜನತೆ ನೀರು ಮತ್ತು ಆಹಾರ ಅರಸಿಕೊಂಡು ಗುಳೆ ಹೋಗುವುದು ಸಾಮಾನ್ಯ ಸಂಗತಿಯಾಗಿತ್ತು.
ಇತ್ತೀಚೆಗಿನ ಅಂದರೆ ಕಳೆದ ಮುವತ್ತು ವರ್ಷಗಳಲ್ಲಿ ಬರದ ಚಿತ್ರಣವೇ ಬದಲಾಗಿ ಹೋಗಿದೆ. ಬರ ಎನ್ನುವುದು ಪ್ರಕೃತಿಯ ಸೃಷ್ಟಿಗಿಂತ ಹೆಚ್ಚಾಗಿ ಮಾನವ ನಿರ್ಮಿತ ಬರ ಪದೇ ಪದೇ ಈ ದೇಶದ ಹಲವಾರು ರಾಜ್ಯಗಳಲ್ಲಿ ತಲೆದೋರತೊಡಗಿದೆ. ಮನುಷ್ಯರು ಮತ್ತು ಪ್ರಾಣಿಗಳ ಕುಡಿಯುವ ನೀರಿಗಾಗಿ ಬಳಕೆಗೆ ತರಲಾದ ಕೊಳವೆ ಬಾವಿ ತಂತ್ರಜ್ಞಾನವು ಇಡೀ ಭೂಮಿಯ ಅಂತರ್ಜಲವನ್ನು ಹೀರಿ ಹಾಕುವುದರ ಮೂಲಕ  ನಮ್ಮ ಪ್ರಾಚೀನ ದೇಶಿ ಸಂಸ್ಕೃತಿಯ ಜಲಮೂಲಗಳ ತಾಣಗಳಾಗಿದ್ದ ಕೆರೆ ಕಟ್ಟೆ, ಬಾವಿಗಳನ್ನು ನುಂಗಿ ಹಾಕಿದೆ. ಈಗಿನ ಬರದಲ್ಲಿ ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿನದು ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಹೋದರೂ ಕೇವಲ ನಲವತ್ತು, ಐವತ್ತು ಅಡಿಗಳ ಆಳದಲ್ಲಿ ತೆರೆದ ಬಾವಿಯ ಮೂಲಕ ದೊರೆಯುತ್ತಿದ್ದ ನೀರು ಈಗ ಎರಡು ಸಾವಿರ ಅಡಿಗಳ ಆಳಕ್ಕೆ ಇಳಿದರೂ ದೊರೆಯುತ್ತಿಲ್ಲ.  ಭೂಮಿಯ ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತಿದ್ದ ಕೆರೆಗಳು, ಕಟ್ಟೆಗಳು, ಒಡ್ಡುಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಕೆಲವು ಕರೆ ಕಟ್ಟೆಗಳು ಹೂಳು ಮತ್ತು ಕಸ ಹಾಗೂ ಕಳೆಗಳಿಂದ ತುಂಬಿಕೊಂಡಿದ್ದರೆ, ಇನ್ನರ್ಧ ಕೆರೆಗಳು ಕೃಷಿಭೂಮಿಯಾಗಿ ಇಲ್ಲವೆ ನಿವೇಶನಗಳಾಗಿ ಮಾರ್ಪಾಡಾಗಿವೆ. ಕೆರೆಗಳ ಮತ್ತು ಕಟ್ಟೆಗಳ ಹೂಳೆತ್ತೆವುದು ಒಂದು ಕಾಲದಲ್ಲಿ ಪ್ರತಿ ಊರಿನ ಸಮುದಾಯದ ಚಟುವಟಿಕೆಯಾಗಿತ್ತು. ಈಗ ಅದು ಸರ್ಕಾರ ಕೆಲಸ ಎಂಬ ಉದಾಸೀನ ಭಾವನೆ ಜನರಲ್ಲಿ ಮನೆ ಮಾಡಿದೆ. ಯಾವುದೇ ಗ್ರಾಮಗಳಿಗೆ ಹೋದರೂ ದೇವಸ್ಥಾನಗಳ ಮುಂದೆ ಅಥವಾ ಅಕ್ಕ ಪಕ್ಕದಲ್ಲಿ ಇರುತ್ತಿದ್ದ ಕಲ್ಯಾಣಿಗಳಲ್ಲಿ  ಶುದ್ಧ ತಿಳಿಯಾದ ನೀರು ಸಿಗುತ್ತಿತ್ತು. ಈಗ ಪಾಚಿಗಟ್ಟಿದ ನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ಭಕ್ತರನ್ನು ಸ್ವಾಗತಿಸುತ್ತಿವೆ.
ನಿಸರ್ಗದ ಕೊಡುಗೆಗಳನ್ನು ಮನಸ್ಸೋ ಇಚ್ಚೆ ಬಳಸಿ, ಹಾಳು ಮಾಡುವುದು ನಮ್ಮ ಪಾರಂಪರಿಕ ಪರಮ ಹಕ್ಕು ಎಂಬ ಅಹಂಕಾರದಲ್ಲಿ  ಬದುಕುತ್ತಿರುವ ಆಧುನಿಕ ಜಗತ್ತಿಗೆ ಭವಿಷ್ಯದಲ್ಲಿ ಕಾಡಬಹುದಾದ ಅತ್ಯಂತ ಭೀಕರ ಸಮಸ್ಯೆಗಳೆಂದರೆ ಒಂದು ಕುಡಿಯುವ ನೀರು , ಮತ್ತೊಂದು ಸೃಷ್ಟಿಯಾಗುತ್ತಿರುವ ಕಸದ ಸಮಸ್ಯೆ. ಈಗಾಗಲೇ ಇದರ ಲಕ್ಷಣಗಳು ಎಲ್ಲೆಡೆ ಕಾಣಿಸಿಕೊಂಡಿವೆ. ಮನುಷ್ಯನ ಇಂತಹ ಸ್ವಯಂ ಕೃತ ಅಪರಾಧದಿಂದಾಗಿ ಮೂಕ ಪ್ರಾಣಿಗಳು ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಪರಿತಪಿಸುತ್ತಿವೆ. ಅರಣ್ಯದಲ್ಲಿ ಜಲಮೂಲಗಳು ಬತ್ತಿ ಹೋಗಿ, ಹಸಿರು ಮಾಯವಾಗಿದೆ. ಪ್ರಾಣಿಗಳು ನಾಡಿನತ್ತ ಮುಖಮಾಡಿ ಪ್ರಾಣ ಕಳೆದುಕೊಳ್ಳುತ್ತಿವೆ. ಮನುಷ್ಯ ನಾಗರೀಕತೆ ಹುಟ್ಟಿದಾಗಿನಿಂದ ಅವನ ಜೊತೆಯಲ್ಲಿ ಪಳಗಿದ ಮುಖ್ಯ ಪ್ರಾಣಿಗಳಲ್ಲಿ ನಾಯಿ, ಕುದುರೆ ಮತ್ತು ಹಸು ಅಥವಾ ದನ  ಇವುಗಳು ಮುಖ್ಯವಾದವುಗಳು. ಜಾನುವಾರುಗಳು ಕೃಷಿಯ ಚಟುವಟಿಕೆಯಲ್ಲಿ ಮುಖ್ಯವಾದ ಪಾತ್ರ ವಹಿಸತೊಡಗಿದ ಮೇಲೆ ಅವು ಮನುಷ್ಯನ ಸಂಗಾತಿಗಳಾಗಿ ಈವರೆಗೆ ಬದುಕಿದ್ದವು. ಆದರೆ, ಕೃಷಿ ಚಟುವಟಿಕೆಗೆ ಅಧುನಿಕ ತಂತ್ರಜ್ಞಾನ ಕಾಲಿರಿಸಿದ ಮೇಲೆ ರೈತರಿಗೆ ಅವುಗಳ ಮೇಲಿದ್ದ ಕಾಳಜಿ ಮತ್ತು ಕಳ್ಳು ಬಳ್ಳಿಯ ಸಂಬಂಧ ಕಡಿದು ಹೋಯಿತು. ಟ್ರಾಕ್ಟರ್ ಮತ್ತು ಟಿಲ್ಲರ್ ಬಳಕೆ ಬಂದ ಮೇಲೆ ಜಾನುವಾರುಗಳೆಂದರೆ, ಮಾಂಸದ ಪ್ರಾಣಿಗಳು ಎಂಬ ಭಾವನೆ ಬೆಳೆಯತೊಡಗಿತು. ಇದಕ್ಕೆ ಉದಾಹರಣೆ ಎಂಬಂತೆ ನಾಡಿನೆಲ್ಲಡೆ ರಸ್ತೆಗಳಲ್ಲಿ ನಾವು ಬಿಡಡಿ ದನಕರುಗಳನ್ನು ಕಾಣುತ್ತಿದ್ದೇವೆ. ನಗರಗಳಲ್ಲಿ ಕುಡಿಯಲು ಒಂದು ಹನಿ ನೀರಿಲ್ಲದೆ, ಅಂಬಾ ಎಂದು ಆರ್ತನಾದದಲ್ಲಿ ಕೂಗುತ್ತಾ ಓಡಾಡುವ ದನಕರುಗಳನ್ನು ನೋಡಿದಾಗ ಕರುಳು ಕಿತ್ತು ಬಂದ ಅನುಭವವಾಗುತ್ತದೆ. ಇಂತಹ ಮೂಕ ಪ್ರಾಣಿಗಳಿಗೆ ಒಂದಿಡಿ ಮೇವು, ಒಂದು ಕೊಡ ನೀರು ಕೊಡಲಾಗದ ದೇಶ ಭಕ್ತರು “ ಗೋ ಸಂಕ್ಷರಣೆಯ” ಹೆಸರಿನಲ್ಲಿ ಮಾದ್ಯಮಗಳಲ್ಲಿ ಮಿಂಚುತ್ತಿದ್ದಾರೆ. ಹಲವರಿಗೆ ಇದು ಕೇಂದ್ರ ಸರ್ಕಾರದ ಹಣ ದೋಚುವ ದಂಧೆಯಾಗಿದೆ ಎಂದರೆ ಅತಿಶಯದ ಮಾತಲ್ಲ.
ಇಂತಹ ಸಂಕಟದ ಕ್ಷಣಗಳಲ್ಲಿ ನಮ್ಮ ನಡುವಿನ ಬಲು ಸೂಕ್ಷ್ಮತೆಯ ಬರಹಗಾರ ಹಾಗೂ ನಾಡಿನ ಜಲತಜ್ಞ ಎಂದು ಕರೆಯಬಹುದಾದ ಶಿರಸಿ ಬಳಿಯ ಕಳವೆ ಗ್ರಾಮದ ಶಿವಾನಂದ ಕಳವೆ ಅವರು ಇತ್ತೀಚೆಗೆ ಹೊರ ತಂದಿರುವ “ ಕ್ಷಾಮ ಡಂಗುರ” ಎಂಬ ಕೃತಿ ನಮ್ಮೆಲ್ಲರ ಅವಿವೇಕತನಕ್ಕೆ ಮತ್ತು ಮನುಷ್ಯನ ವಿಕಾರಗಳಿಗೆ ಕನ್ನಡಿ ಹಿಡಿದಂತಿದೆ. ತನ್ನೂರಿನಲ್ಲಿ  ನಿರ್ಮಿಸಿಕೊಂಡಿರುವ ಕಾನ್ಮನೆ ಎಂಬ ಕುಟಿರದಲ್ಲಿ ಪರಿಸರ ಪ್ರಜ್ಞೆಯಯನ್ನು ನಾಡಿನ ಮಕ್ಕಳ ಎದೆಯಲ್ಲಿ ಬಿತ್ತುವ ಕ್ರಿಯೆಯನ್ನು ಕಾಯಕ ಮಾಡಿಕೊಂಡಿರುವ ಮಿತ್ರ ಕಳವೆಯವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕನ್ನಡ ನಾಡನ್ನು ತಿರುಗುತ್ತಾ ಪ್ರತಿ ಪ್ರದೇಶದ ಮಣ್ಣಿನ ವಾಸನೆಯನ್ನು ಬಲ್ಲವರಾಗಿದ್ದಾರೆ.  ಕನ್ನಡನಾಡಿನ  ನೆಲ. ಜಲ, ವಾಯು,, ಗಿಡ, ಮರ , ಪಕ್ಷಿ ಮತ್ತು ಪ್ರಾಣಿಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದಾರೆ. ಹಾಗಾಗಿ ಈ ಕೃತಿಯಲ್ಲಿ ಪ್ರಸ್ತಾವನೆಯ ಮಾತುಗಳನ್ನು ಬರೆಯುತ್ತಾ, “ ಈಗ ಕರ್ನಾಟಕಕ್ಕೆ ಬಂದಿರುವ ಬರವನ್ನು ವಿಶ್ಲೇಷಿಸುತ್ತಾ ಇದನ್ನು ನೀರಿನ ಟ್ಯಾಂಕರ್ ಗಳ ಸುಗ್ಗಿಗಾಗಿ ಸೃಷ್ಟಿಯಾದ ಬರ” ಎಂಬ ಅರ್ಥಪೂರ್ಣವಾದ ಮಾತುಗಳನ್ನು ದಾಖಲಿಸಿದ್ದಾರೆ.
ಉತ್ತರದ ಬೀದರ್ ನಿಂದ ದಕ್ಷಿಣದ  ಚಾಮರಾಜನಗರದ ವರೆಗೆ ಮತ್ತು ಪೂರ್ವದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಹಿಡಿದು ಪಶ್ಚಿಮ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲುಕಿನ ವರೆಗೆ ನಾಡಿ ಮಿಡಿತವನ್ನು ಬಲ್ಲ ಶಿವಾನಂದ ಕಳವೆಯವರು ಈ ಕೃತಿಯಲ್ಲಿ ಮುವತ್ತೆರೆಡು ಲೇಖನಗಳನ್ನು ದಾಖಲಿಸಿದ್ದು, ಈ ನಾಡಿನ ಐತಿಹಾಸಿಕ ಕೆರೆಗಳಗಳಿಂದ ಸಣ್ಣ ಕರೆಗಳ ದುಸುತ್ಥಿಯನ್ನು ಮನ ಮುಟ್ಟವಂತೆ ವಿವರಿಸಿದ್ದಾರೆ. ಇವಿಷ್ಟು ಸಾಲದೆಂಬಂತೆ ಕಾವೇರಿ ಕಣಿವೆಯುದ್ದಕ್ಕೂ ತಿರುಗಾಡಿ ಅಲ್ಲಿನ ಸ್ಥಿತಿಗತಿಗಳ ಅವಲೋಕನವನ್ನು ಮಾಡುತ್ತಾ, ನಾವು ಜಲ ಸಂರಕ್ಷಣೆಯಲ್ಲಿ ಎಲ್ಲಿ ದಾರಿ ತಪ್ಪಿದ್ದೇವೆ ಎಂಬುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.  ಇಷ್ಟೇ ಕಾಳಜಿಯಿಂದ ಮಲೆನಾಡಿನ ಮಳೆಯ ಕೊರತೆಯನ್ನು ಚರ್ಚಿಸುವುದರ ಜೊತೆಗೆ ತಾವು ಹುಟ್ಟಿ ಬೆಳೆದ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ ನೆಲೆಯಾದ ಲಾಲ್ ಗುಳಿ  ಸಮೀಪದ ಗಿರಿ ಗಿರಿ ಪಾತರ್ ಎಂಬ ಸ್ಥಳದಿಮದ ಹಿಡಿದು, ಹಳಿಯಾಳ ತಾಲ್ಲೂಕಿನ ಭಗವತಿ ಎಂಬ ಅರಣ್ಯ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆಯ ಪ್ರಮಾಣ ಹಾಗೂ ನೀರನ್ನು ಹಿಡಿದಿಡುವ ಅಲ್ಲಿನ ಮಣ್ಣಿನ ಗುಣವನ್ನು ವಿಶ್ಲೇಷಿಸಿದ್ದಾರೆ.
ಕಳವೆಯ ಜಲಕ್ಷಾಮದ ಕುರಿತ ಚಿಂತನೆಯ ವಿಶೇಷವೇನೆಂದರೆ, ಅವರು ಕೇವಲ ಸಮಸ್ಯೆಗಳ ಮಾತ್ರ ಬೊಟ್ಟು ಮಾಡದೆ,ಪರಿಹಾರಕ್ಕು ಸಹ ಮಾರ್ಗೋಪಾಯಗಳನ್ನು ಸೂಚಿಸುತ್ತಾರೆ. ಇದರ ಜೊತೆಗೆ ಆ ಪ್ರದೇಶದ ಮಳೆಯ ಪ್ರಮಾಣದ ಇತಿಹಾಸ,ಹಾಗೂ ಈ ಹಿಂದೆ ಇದ್ದ ಜಲಮೂಲ ತಾಣಗಳ ಬಗ್ಗೆ ಗಮನ ಸೆಳೆಯುತ್ತಾರೆ. “ ನೀರಿನ ಸಮಸ್ಯೆ ಇರುವ ಹಳ್ಳಿಗಳು ನಿಧಾನಕ್ಕೆ ತಮ್ಮ ಕೃಷಿ ಜೀವನದ ಅವಲೋಕನ ನಡೆಸಬೇಕು. ನೀರಿನ ಬಳಕೆಯ ತಿಳುವಳಿಕೆ ಪಡೆಯಬೇಕು. ನೀರು ಕಣ್ಮರೆಯಾದದ್ದು ಹೇಗೆ? ಎಂದು ಗಮನಿಸುತ್ತಾ ಹಿಂದಕ್ಕೆ ಹೋದರೆ, ಊರಲ್ಲಿ ನೀರು ಹಿಡಿಯುವ ಮುಂದಿನ ದಾರಿಗಳು ಕಾಣಿಸುತ್ತವೆ” ಎಂಬ ವಿವೇಕದ ಮಾತನ್ನಾಡುವ ಲೇಖಕರು. ಮಲೆನಾಡಿನ ಜಲಕ್ಷಾಮ ಕುರಿತಂತೆ ಬರೆಯುತ್ತಾ, “ ಗುಡ್ಡಗಾಡಿನ ತುಂಬಾ ಮರದಮ್ಮನ ನೆಲೆಯಾಗಿ ನೀರಿನಲ್ಲಿ ನಗುತ್ತಿದ್ದ ಮಲೆನಾಡಿನ ೂರುಗಳಿಗೆ ಬರದಮ್ಮನ ಆಗಮನವಾಗಿದೆ. ಕಳೆದ ವರ್ಷ ವಾಡಿಕೆಯ ಅರ್ಧದಷ್ಟು ಮಳೆ ಸುರಿಯದ ಕಾರಣ ಜಲ ಸಮಸ್ಯೆ ಬೆಳೆದಿದೆ. ಕಾಡುಗುಡ್ಡಗಳಲ್ಲಿ ನಿಸರ್ಗ ಬಚ್ಚಿಟ್ಟ ನೀರಿನ ಠೇವಣಿಯನ್ನು ಖಾಲಿ ಮಾಡುವ ತಂತ್ರವನ್ನು ಕಳೆದ ನಲವತ್ತು ವರ್ಷಗಳಿಂದ ಅನುಸರಿಸಿದ ಪರಿಣಾಮ ಜಲನಿಧಿಗಳು ಬರಿದಾಗಿವೆ” ಎಂಬ ಎಚ್ಚರಿಕೆಯ ಸಂದೇಶವನ್ನೂ ಸಹ ಈ ಕೃತಿಯಲ್ಲಿ ನೀಡಿದ್ದಾರೆ.

ಬರದ ಸಂದರ್ಭದಲ್ಲಿ ಸರ್ಕಾರ ಮತ್ತು ಜನಪ್ರತಿನಿದಿಗಳತ್ತ ಮುಖಮಾಡದೆ, ನಾವೇ ಸ್ವಯಂ ಪ್ರೇರಿತರಾಗಿ ಏನೆಲ್ಲಾ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದಕ್ಕೆ ದಿಕ್ಷೂಜಿಯಂತಿರುವ  ಶಿವಾನಂದ ಕಳವೆಯವರ ಈ ಕೃತಿ ಕರ್ನಾಟಕದ ಪ್ರತಿ ಮನೆಯಲ್ಲಿರಬೇಕಾದ ಅಮೂಲ್ಯ ಕೃತಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ